ಶ್ರೀದವಿಠಲದಾಸ (ಕರ್ಜಿಗಿ ದಾಸಪ್ಪ)
	ಹದಿನೆಂಟನೆಯ ಶತಮಾನದ ಹರಿದಾಸರಲ್ಲೊಬ್ಬರು. ಅಪರೋಕ್ಷಜ್ಞಾನಿಗಳೆಂದು ಪ್ರಖ್ಯಾತರಾಗಿದ್ದ ಜಗನ್ನಾಥದಾಸರ ಶಿಷ್ಯರು. ಪೂರ್ವಾಶ್ರಮದ ಹೆಸರು ದಾಸಪ್ಪ. ವರದಾ ನದಿಯ ತೀರದಲ್ಲಿರುವ ಕರ್ಜಿಗಿ ಇವರ ಸ್ಥಳ. ಹೆಂಡತಿ ಗುಂಡಮ್ಮ. ಜಗನ್ನಾಥದಾಸರು ಮೈಸೂರು ದೇಶದಲ್ಲಿ ಸಂಚರಿಸುತ್ತಿದ್ದಾಗ ಊರಿನ ಜನರ ಆಹ್ವಾನದ ಮೇರೆಗೆ ಕರ್ಜಿಗಿಗೆ ಬಂದಿದ್ದಾಗ ದಾಸಪ್ಪನ ಮನೆಯಲ್ಲಿ ಉಳಿದಿದ್ದರು. ದಾಸಪ್ಪ ಶಾಸ್ತ್ರಗಳನ್ನು ಬಲ್ಲವರಾಗಿದ್ದರೂ ವಿಷಯ ಲೋಲುಪರಾಗಿ ವೇಶ್ಯಾಸಹವಾಸದಲ್ಲಿ ಕಾಲ ಕಳೆಯುತ್ತಿದ್ದರು. ಇವರನ್ನು ಕಂಡ ಜಗನ್ನಾಥದಾಸರ ಶಿಷ್ಯ ಪ್ರಾಣೇಶದಾಸರು ಆದದ್ದಾಯ್ತಿನ್ನಾದರೂ ಒಳ್ಳೇಹಾದಿ ಹಿಡಿಯೋ ಪ್ರಾಣಿ ಎಂದು ಇವರನ್ನೇ ಕುರಿತು ಹಾಡಿದರಂತೆ. ಅಂದಿನಿಂದ ದಾಸಪ್ಪನವರು ಜಗನ್ನಾಥದಾಸರ ಶಿಷ್ಯರಾದರು. ಅವರಿಂದ ಶ್ರೀದವಿಠಲ ಎಂಬ ಅಂಕಿತವನ್ನು ಪಡೆದರು; ಕರ್ಜಿಗಿ ದಾಸರೆಂದು ಪ್ರಖ್ಯಾತರಾದರು. ಇವರು ಜಗನ್ನಾಥದಾಸರ ಹರಿಕಥಾಮೃತಸಾರಕ್ಕೆ ಇಪ್ಪತ್ನಾಲ್ಕು ಷಟ್ಟದಿಗಳಲ್ಲಿ ಫಲಸ್ತುತಿಯನ್ನು ಬರೆದಿದ್ದಾರೆ. ಸಾರವೆಂದರೆ ಹರಿಕಥಾಮೃತ ಸಾರ ಎಂದು ಮೆಚ್ಚಿ ನುಡಿದಿದ್ದಾರೆ. ತಮ್ಮ ಗುರು ಜಗನ್ನಾಥದಾಸರನ್ನು ಕುರಿತು ಸಂಗಸುಖವ ಬಯಸಿ ಬದುಕಿರೋ ರಂಗನೊಲಿದ ಭಾಗವತರು ತೆರಳಿದರು ಶ್ರೀಜಗನ್ನಾಥದಾಸಾರ್ಯರು ಶಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ಎಂಬ ಎರಡು ಕೀರ್ತನೆ ಗಳನ್ನು ರಚಿಸಿದ್ದಾರೆ.				
	(ಟಿ.ಎನ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ